ಗ್ರಾಫ್, ರೆನ್ಯೇಡೆ -
1641-1673. ಡಚ್ ವೈದ್ಯ ಮತ್ತು ಜೀವವಿಜ್ಞಾನಿ. ಅಂಗರಚನಾಪರಿಣತ. ಶ್ಕೂನ್‍ಹೋವೆನಿನಲ್ಲಿ 1641ರ ಜುಲೈ 30ರಲ್ಲಿ ಜನನ. ಲೋವೈನ್, ಉಟ್ರೆಕ್ಟ್. ಲೈಡನ್ ಮತ್ತು ಆಂಜಿಯರ್ಸುಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಸ್ವಲ್ಪ ಕಾಲ ಪ್ಯಾರಿಸಿನಲ್ಲಿ ವೈದ್ಯ ವೃತ್ತಿ ನಡೆಸಿ 1667ರಲ್ಲಿ ಡೆಲ್‍ಫ್ಟ್‍ಗೆ ಹಿಂತಿರುಗಿ ಬಂದು ಸಂಶೋಧನೆಗಳಲ್ಲಿ ನಿರತನಾದ. ಎಲ್ಲ ಪ್ರಾಣಿಗಳೂ ತತ್ತಿಗಳಿಂದ ಬೆಳೆಯುತ್ತವೆಂಬುದು ಅಂದಿನ ನಂಬಿಕೆಯಾಗಿತ್ತು. ಇದರ ನೈಜತೆಯನ್ನು ಗ್ರಾಫ್ ಶೋಧಿಸಿದ. ಸ್ತನಿಗಳ ಅಂಡಾಶಯದಲ್ಲಿ ಅಂಡಾಣುವಿನ ಸುತ್ತ ಇರುವ ಜೀವಕೋಶ ಪದರಗಳ ಸಂಪುಟವನ್ನು ಅವನು ತತ್ತಿ ಎಂದು ವಿವರಿಸಿದ (1672). ಇದು ತಪ್ಪು ಎಂದು ಆ ಮೇಲಿನ ಶೋಧನೆಗಳಿಂದ ತಿಳಿದುಬಂದರೂ ಗ್ರಾಫ್‍ನ ಈ ಶೋಧನೆಯ ಪ್ರಾಮುಖ್ಯವನ್ನು ಅಲ್ಲಗಳೆಯುವಂತಿಲ್ಲ. ಹೆಣ್ಣು ಸಸ್ತನಿಯ ಅಂಡಾಶಯ ಕೋಶಿಕೆಗಳಿಗೆ (ಫಾಲಿಕಲ್ಸ್) ಆತನ ಹೆಸರನ್ನೇ ಇಡಲಾಗಿದೆ (ಗ್ರಾಫಿಯನ್ ಫಾಲಿಕಲ್ಸ್). ಈ ಅಂಡಾಶಯ ಕೋಶಿಕೆಗಳಿಂದ ಅಂಡಾಣು ಬಲಿತು ಹೊರಬೀಳುವುದನ್ನೂ ಅವನು ವಿವರಿಸಿದ್ದಾನೆ. ಗಂಡು ಸ್ತನಿಗಳಲ್ಲಿರುವ ವೃಷಣಗಳ ಸೂಕ್ಷ್ಮರಚನೆಯನ್ನು ಕೂಡ ಆ ಮೊದಲೇ ಅವನು ವಿವರಿಸಿದ್ದ (1668). ಪ್ರಯೋಗದ ಸಲುವಾಗಿ ನಾಯಿಯಲ್ಲಿ ಮೇದೋಜೀರಕಾಂಗ ಮತ್ತು ಪಿತ್ಥಕೋಶಗಳಿಂದ ರಸಗಳನ್ನು ಹೊರತೆಗೆದು ಕೂಡಿಹಾಕುವ ವಿಧಾನಗಳನ್ನು 1664 ರಲ್ಲಿ ಆವಿಷ್ಕರಿಸಿದ. ಅಲ್ಲದೇ ಪ್ರಾಣಿಗಳನ್ನು ಸಂಗ್ರಹಾಲಯಗಳಲ್ಲಿ ಸಂರಕ್ಷಿಸಿಡುವ ವಿಧಾನಗಳನ್ನು ಕಂಡುಹಿಡಿದು ಉತ್ತಮಗೊಳಿಸಿದ. ಗ್ರಾಫ್ ಮಡಿದದ್ದು 1673ರ ಅಗಸ್ಟ್ 17ರಂದು.
(ಎಚ್.ಬಿ.ಡಿ.; ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ